ಶ್ರೀ ರಾಮಚಂದ್ರನ ರಕ್ಷಕ ಆಂಜನೇಯ: ಸಚಿವೆ ಶೋಭಾ ಕರಂದ್ಲಾಜೆ
ಕೊಪ್ಪಳ : ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಅವರು ರಾಮ ಭಕ್ತ ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಸ್ವಚ್ಛ ತೀರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಸ್ವಚ್ಛತಾ ಸೇವೆ ಸಲ್ಲಿಸಿದರು.
ಅಂಜನಾದ್ರಿ ಬೆಟ್ಟದ ಮೇಲಿರುವ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿ ಬಳಿಕ ಸ್ವಚ್ಛತಾ ಸೇವೆ ಸಲ್ಲಿಸಿದರು.
ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಮಾತನಾಡಿ, ಶ್ರದ್ಧಾ ಕೇಂದ್ರವಾದ ಅಯೋಧ್ಯೆಯಲ್ಲಿ ಜ.22ಕ್ಕೆ ಜರುಗಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ.ರಾಮನಿಗಾಗಿ ಸೇತುವೆ ನಿರ್ಮಾಣ ಹಾಗೂ ಸಂಜೀವಿನಿಗಾಗಿ ಬೆಟ್ಟವನ್ನೇ ಹೊತ್ತು ತಂದವರು ಆಂಜನೇಯ. ಶ್ರೀ ರಾಮಚಂದ್ರನನ್ನು ರಕ್ಷಣೆ ಮಾಡಿದ್ದು ಆಂಜನೇಯ. ಸೀತಾ ಮಾತೆಯನ್ನು ಹುಡುಕಿದ್ದು ಆಂಜನೇಯ ಅದಕ್ಕಾಗಿಯೇ ಪವನಪುತ್ರ ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ರಾಮನ ಬರುವಿಕೆಗಾಗಿ ಕಾದು ಕುಳಿತಿದ್ದ ಶಬರಿಯು ರಾಮನಿಗಾಗಿ ಬಾರೆ ಹಣ್ಣುಗಳನ್ನು ನೀಡಿದ್ದಳು.ಅಂತಹ ಬಾರೆಹಣ್ಣು ಗಳನ್ನು ರಾಮಭಕ್ತೆ ಶಬರಿಯ ಗೃಹೆ ಸ್ಥಳದಿಂದ ಪ್ರಸಾದದ ರೂಪದಲ್ಲಿ ಭಕ್ತರು ನೀಡಿದ್ದು, ಬಾರೆ ಹಣ್ಣುಗಳನ್ನು ಅಯೋಧ್ಯೆಗೆ ತಲುಪಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಕೊಪ್ಪಳ ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಹಲವು ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Post a Comment